ಸತ್ಯಲೋಕೇಶ್, ಪಾವಗಡ
ಪಾವಗಡ: ತಾಲ್ಲೂಕಿನ ವಳ್ಳೂರು ಗ್ರಾಮದ ಎಸ್.ಸಿ. ಕಾಲೋನಿ ವ್ಯಾಪ್ತಿಯಲ್ಲಿ ನರಿ ದಾಳಿ ನಡೆಸಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮುತ್ಯಾಲಮ್ಮ (52) ಎಂಬ ಮಹಿಳೆಯರ ಮೇಲೆ ನರಿ ಏಕಾಏಕಿ ದಾಳಿ ನಡೆಸಿದೆ, ಮೂಗು ಕಣ್ಣು ಹಣೆ ಭಾಗಗಳಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವದಿಂದ ನರಳುತ್ತಿರುವುದನ್ನು ಗಮನಿಸಿ, ಆಕೆಯ ರಕ್ಷಣೆಗೆ ಮುಂದಾದ ರಾಮಣ್ಣ (56) ಹಾಗೂ (50) ಉಷಾ ಅವರ ಮೇಲೂ ನರಿ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಘಟನೆಯನ್ನು ಗಮನಿಸಿದ ಸ್ಥಳಿಯರು ತಕ್ಷಣ ಗಾಯಾಳುಗಳನ್ನು ತಿರುಮಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗ್ರಾಮದ ಜನವಸತಿ ಪ್ರದೇಶದ ಸಮೀಪವೇ ನರಿ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಘಟನೆಯಲ್ಲಿ ಗಾಬರಿಯಾಗಿ ಗ್ರಾಮದ ಒಳಗಡೆಬಂದ ಈ ನರಿಯನ್ನು ಗ್ರಾಮದಲ್ಲಿರುವ ನಾಯಿಗಳು ಕಚ್ಚಿ ಸಾಯಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ. ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮುತ್ಯಾಲಮ್ಮ ಅವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಹಿತಿಯನ್ನು ಪಡೆದುಕೊಂಡ ವಲಯ ಅರಣ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಕ್ಷೇಮ ವಿಚಾರಿಸಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದೆಂದು ತಿಳಿಸಿದ್ದಾರೆ.
ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಲು ಆಂಬುಲೆನ್ಸ್ ಗೆ ಡೀಸೆಲ್ ಗೆ 3000.ರೂ ರೂಗಳನ್ನು ಪಾವತಿಸಬೇಕೆಂದು ಗಾಯಾಳುಗಳ ಸಂಬಂಧಿಕರಿಗೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದಾಗ ಕಡುಬಡವರಾದ ಮುತ್ಯಾಲಮ್ಮನವರು ನಮ್ಮ ಕೈಯಲ್ಲಿ ಅಷ್ಟೊಂದು ಹಣ ಇಲ್ಲ ಎಂದು ಕೈ ಚೆಲ್ಲಿದಾಗ, ಪತ್ರಕರ್ತರು ಆಸ್ಪತ್ರೆಗೆ ಧಾವಿಸಿ ತಾಲೂಕು ಆಡಳಿತಾಧಿಕಾರಿಗೆ ಸಮಸ್ಯೆಯನ್ನು ಬಿಚ್ಚಿಟ್ಟಾಗ ಆಡಳಿತಾಧಿಕಾರಿ ನವೀನ್ ತಕ್ಷಣ ಸ್ಪಂದಿಸಿ ಆಸ್ಪತ್ರೆಯಿಂದಲೇ ಅವರನ್ನು ತುಮಕೂರಿಗೆ ರವಾನಿಸಿದರು.
ಇನ್ನೂ ಇಂತಹ ಪ್ರಕರಣಗಳಲ್ಲಿ ಉಚಿತವಾಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ತುಮಕೂರಿನ ಆಸ್ಪತ್ರೆಗೆ ರವಾನಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.