ತುಮಕೂರು: ರಾಜ್ಯದಲ್ಲಿ ಬರಗಾಲದ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳ ಹಾಗೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಮುಂದಾಗಿರುವುದು ಜನವಿರೋಧಿ ನಿರ್ಧಾರವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತುಮಕೂರು ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್ ತೀವ್ರವಾಗಿ ಖಂಡಿಸಿದ್ದಾರೆ.
ನಂದಿನಿ ಹಾಲಿನ ಪ್ರತಿ ಲೀಟರ್‌ಗೆ ೮ ರೂ. ಹಾಗೂ ಮೊಸರಿನ ಪ್ರತಿ ಲೀಟರ್‌ಗೆ ೧೪ ರೂ. ದರ ಹೆಚ್ಚಿಸಿರುವ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹೈನುಗಾರರ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶವಿದ್ದರೆ ಹಾಲಿನ ಬೆಲೆ ಹೆಚ್ಚಿಸುವ ಬದಲು ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ಪಶು ಆಹಾರವನ್ನು ಕಡಿಮೆ ದರದಲ್ಲಿ ಒದಗಿಸಬೇಕು. ಕೆಎಂಎಫ್‌ನಲ್ಲಿರುವ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಹಾಲಿನ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಾಲು ಮತ್ತು ಮೊಸರು ಪ್ರತಿಯೊಂದು ಕುಟುಂಬದ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳಾಗಿವೆ. ಇವುಗಳ ಬೆಲೆ ಏರಿಕೆಯು ವಿಶೇಷವಾಗಿ ಬಡವರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ರಾಜ್ಯದ ಸಾರಿಗೆ ನಿಗಮಗಳು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.೨೮ರಷ್ಟು ಹಾಗೂ ಬೆಂಗಳೂರು ನಗರದಲ್ಲಿ ಶೇ.೪೫ರಷ್ಟು ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪವು ಸಾರ್ವಜನಿಕರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸಲಿದೆ. ಪ್ರತಿನಿತ್ಯ ಕೆಲಸ, ಶಿಕ್ಷಣ ಹಾಗೂ ಇತರ ಅಗತ್ಯಗಳಿಗಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಬಡವರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬರಗಾಲದ ಕಾರಣದಿಂದ ಕೃಷಿ ಕೂಲಿಕಾರರಿಗೆ ನಿರಂತರ ಕೆಲಸ ದೊರೆಯುತ್ತಿಲ್ಲ. ಕಾರ್ಮಿಕರ ಆದಾಯದಲ್ಲಿಯೂ ಯಾವುದೇ ಗಮನಾರ್ಹ ಹೆಚ್ಚಳವಾಗಿಲ್ಲ. ಮತ್ತೊಂದೆಡೆ ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕುಟುಂಬ ನಿರ್ವಹಣೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿರುವುದು ಜನರ ಜೀವನದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ.
ಆದ್ದರಿಂದ ರಾಜ್ಯ ಸರ್ಕಾರ ಜನಸಾಮಾನ್ಯರ ಜೀವನೋಪಾಯದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಹಾಲು ಮತ್ತು ಮೊಸರಿನ ದರ ಏರಿಕೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪವನ್ನು ತಕ್ಷಣವೇ ಕೈಬಿಡಬೇಕು. ಜನರ ಅಗತ್ಯಗಳಿಗೆ ಸ್ಪಂದಿಸುವಂತಹ ಜನಪರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಾಜುದ್ದೀನ್ ಷರೀಫ್ ಒತ್ತಾಯಿಸಿದ್ದಾರೆ.
ಜನವಿರೋಧಿ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಹಾಗೂ ರಾಜ್ಯಾದ್ಯಂತ ನಡೆಯುವ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.