ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ : ಕೃಷಿಸಾಲದ ಬಾಕಿಗಾಗಿ ಕೃಷಿ ಭೂಮಿಯನ್ನು ಆನ್‌ಲೈನ್ ಮೂಲಕ ಹರಾಜು ಮಾಡಿರುವ ಕರ್ಣಾಟಕ ಬ್ಯಾಂಕಿನ ರೈತವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ರೈತ ಸಂಘ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ತುರುವೇಕೆರೆ ಕರ್ಣಾಟಕ ಬ್ಯಾಂಕ್ ರೈತ ವಿರೋಧಿ ನೀತಿ ಅನುಸರಿಸಿದೆ. ತಾಳಕೆರೆ ಗ್ರಾಮದ ರೈತ ಕೃಷಿಗಾಗಿ ಮಾಡಿದ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸುಮಾರು ನಾಲ್ಕು ಕೋಟಿ ಬೆಲೆ ಬಾಳುವ ಜಮೀನನ್ನು ಕೇವಲ ೩೪ಲಕ್ಷದ ೮೦ಸಾವಿರ ರೂಗಳಿಗೆ ಆನ್‌ಲೈನ್ ಮೂಲಕ ಹರಾಜು ಮಾಡಿ ಆ ರೈತ ಕುಟುಂಬವನ್ನು ಬೀದಿಗೆ ತಳ್ಳುವ ಕೆಲಸ ಮಾಡಿದೆ. ಕೂಡಲೇ ಬ್ಯಾಂಕ್ ತಾನು ಮಾಡಿರುವ ತಪ್ಪನ್ನು ಸರಿಪಡಿಸಿ, ರೈತನ ಕ್ಷಮೆ ಕೇಳಿ ಹರಾಜು ಮಾಡಿರುವ ಭೂಮಿಯನ್ನು ಪುನಃ ರೈತರಿಗೆ ನೀಡದಿದ್ದಲ್ಲಿ ರಾಜ್ಯ ರೈತ ಸಂಘ ರಾಜ್ಯದಲ್ಲಿರುವ ಎಲ್ಲಾ ಕರ್ಣಾಟಕ ಬ್ಯಾಂಕ್ ಶಾಖೆಗೆ ಬೀಗ ಜಡಿದು ಬ್ಯಾಂಕ್ ಎದುರು ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಸಿದರು.
ಸಂವಿಧಾನದ ಪರಿಚ್ಛೇಧ ೨೧ರ ಪ್ರಕಾರ ಯಾವುದೇ ವ್ಯಕ್ತಿಯ ಬದುಕುವ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲ. ಅಂತಹುದರಲ್ಲಿ ಕರ್ಣಾಟಕ ಬ್ಯಾಂಕ್ ಸಂವಿಧಾನ ವಿರೋಧಿಯಾಗಿ ವರ್ತಿಸಿದೆ. ಎಲ್ಲಾ ಬ್ಯಾಂಕುಗಳು ಒಂದು ರೀತಿ ರಿಯಲ್ ಎಸ್ಟೇಟ್ ದಂಧೆಯನ್ನಾಗಿ ಮಾಡಿಕೊಂಡಿವೆ. ರಿಯಲ್ ಎಸ್ಟೇಟ್ ಉದ್ಯಮಿ, ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿ ಯಾವ ರೈತ ಸಾಲ ಮರುಪಾವತಿ ಮಾಡಲು ವಿಳಂಬ ಮಾಡುತ್ತಾನೋ ಅಂತಹ ರೈತರ ಸಾಲವಸೂಲಾತಿಗೆ ನ್ಯಾಯಾಲಯದಲ್ಲಿ ಡಿಕ್ರಿ ತಂದು ರೈತನಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡದೆ ಒಳವ್ಯವಹಾರದ ಮೂಲಕ ಆನ್ ಲೈನ್ ಹರಾಜು ಮಾಡಿ ತಮಗೆ ಬೇಕಾದ ಶ್ರೀಮಂತರಿಗೆ ಹರಾಜು ಮಾಡುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ರೂ ಸಾಲ ಮನ್ನಾ ಮಾಡುತ್ತಿವೆ, ಆದರೆ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ರೈತ ಸಾಲದ ಶೂಲದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕರ್ಣಾಟಕ ಬ್ಯಾಂಕ್ ಮಾತ್ರವಲ್ಲ ಯಾವುದೇ ಬ್ಯಾಂಕುಗಳು, ಮೈಕ್ರೋಫೈನಾನ್ಸ್ ಗಳು ರೈತರ ಜಮೀನು, ಮನೆ ಯಾವುದನ್ನೇ ಆಗಲಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಮುಂದಾದಲ್ಲಿ ರೈತ ಸಂಘ ತೀವ್ರವಾದ ಹೋರಾಟ ನಡೆಸಲಿದೆ ಎಂದ ಅವರು, ರೈತರ ಒಂದೇ ಒಂದು ಗುಂಟೆ ಜಮೀನನ್ನು ಬ್ಯಾಂಕುಗಳು ಕಿತ್ತುಕೊಳ್ಳಲು ಇರುವ ಆನ್ ಲೈನ್ ಹರಾಜು ಕಾನೂನಿಗೆ ತಡೆ ತರಬೇಕೆಂದು ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಚೈತನ್ಯ, ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ, ಡಿಜಿಎಂ ಹನುಮಂತಪ್ಪ, ಭಾಸ್ಕರ್, ಎಜಿಎಂ ಶೇಷಾದ್ರಿ, ಉಪವಿಭಾಗಾಧಿಕಾರಿ ಮೋಹನ್, ತಹಸೀಲ್ದಾರ್ ಕುಂಇ ಅಹಮದ್ ಮಧ್ಯೆ ಸುಮಾರು ಒಂದು ಗಂಟೆ ಕಾಲ ಸುಧೀರ್ಘ ಚರ್ಚೆ ನಡೆಯಿತು. ಚರ್ಚೆಯ ನಂತರ ಬ್ಯಾಂಕಿನ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹರಾಜಿನ ಮೂಲಕ ಜಮೀನು ಪಡೆದಿರುವ ವ್ಯಕ್ತಿಯನ್ನು ಕರೆಯಿಸಿ ಮಾತನಾಡಿ ರೈತರಿಗೆ ಪುನಃ ಜಮೀನನ್ನು ಕೊಡಿಸುವ ಪ್ರಯತ್ನ ಮಾಡುವುದಕ್ಕೆ ೧೫ ದಿನಗಳ ಕಾಲಾವಕಾಶ ಕೋರಿದರು. ಇದಕ್ಕೆ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ನೇತೃತ್ವದಲ್ಲಿ ರೈತರು ಒಪ್ಪಿಗೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ವಸಂತಕುಮಾರ್, ರವಿಕಿರಣ್ ಪೂರ್ಣಚ್ಚ, ಉಪಾಧ್ಯಕ್ಷರಾದ ಮಹೇಶ್ ಪ್ರಭು, ಕೆಂಪುಗೌಡರು, ಮಲ್ಲಯ್ಯ, ಶಿವಾನಂದ ಕುಗ್ವೆ, ಭೂತಯ್ಯ, ಮಹಿಳಾ ಘಟಕದ ಮಂಜುಳ ಅಕ್ಕಿ, ನೇತ್ರಾವತಿ, ರಮ್ಯರಾಮಣ್ಣ, ಮಮತ, ರತ್ನಮ್ಮ, ಜಿಲ್ಲಾಧ್ಯಕ್ಷ ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಗೌಡ, ದೊಡ್ಡಮಾಳಯ್ಯ, ಲಕ್ಷ್ಮೀನಾರಾಯಣರೆಡ್ಡಿ, ಚಂದ್ರಶೇಖರ್, ಕುಮಾರಸ್ವಾಮಿ, ಹಾಸನ ರಘು, ಜಮೀನು ಕಳೆದುಕೊಂಡ ರೈತ ಕುಟುಂಬ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಉಪಸ್ಥಿತರಿದ್ದರು.