ನವದೆಹಲಿ: ಕಳೆದೊಂದೆರಡು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ 1೦೦೦ ರೂ ಮುಖಬೆಲೆಯ ಹೊಸ ವಿನ್ಯಾಸದ ನೋಡು ಬಿಡುಗಡೆಯ ಬಗೆಗಿನ ವಿಚಾರಕ್ಕೆ ಈಗ ತೆರೆ ಬಿದ್ದಿದೆ.
1,೦೦೦ ರೂಪಾಯಿ ಮುಖಬೆಲೆಯ ನೋಟು ಬಿಡುಗಡೆಯಾಗಲಿದೆ ಎಂಬ ವಿಷಯವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (PIB) ’ಫ್ಯಾಕ್ಟ್ ಚೆಕ್’ (ಸತ್ಯಾಸತ್ಯತೆ ಪರಿಶೀಲನಾ) ವಿಭಾಗವು ತಳ್ಳಿಹಾಕಿದೆ. ಅರಿಶಿಣ ಬಣ್ಣದ, ದೇವಾಲಯದ ಚಿತ್ರವಿರುವ ೧೦೦೦ ರೂ. ಮುಖಬೆಲೆಯ ನೋಟೊಂದರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ನೋಟನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂಬಂತೆ ಅಥವಾ ನವಂಬರ್ 15ನೇ ದಿನಾಂಕದಂದು ಚಲಾವಣೆಗೆ ಬರಲಿದೆ ಎಂಬ ದಾಖಲೆರಹಿತ ವಿಷಯ ಕೆಲವು ಪೋಸ್ಟ್‌ಗಳಲ್ಲಿ ಪ್ರಚುರಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ PIB ಸ್ಪಷ್ಟನೆ ನೀಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ 1,೦೦೦ ರೂಪಾಯಿ ನೋಟನ್ನು ಬಿಡುಗಡೆ ಮಾಡುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ ಎಂದು ತಿಳಿಸಿದೆ.
’X’ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ PIB ಫ್ಯಾಕ್ಟ್ ಚೆಕ್, "ಹೊಸ 1,೦೦೦ ರೂಪಾಯಿ ನೋಟು ಬಿಡುಗಡೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಈ ಸುದ್ದಿ ಸಂಪೂರ್ಣ ಸುಳ್ಳು" ಎಂದು ಹೇಳಿದೆ. ಹೊಸ 1,೦೦೦ ರೂಪಾಯಿ ನೋಟು ಬಿಡುಗಡೆ ಮಾಡುವ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಯಾವುದೇ ಘೋಷಣೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದೆ.
"ಅಧಿಕೃತ ಮೂಲಗಳ ಮೂಲಕ ಮಾಹಿತಿಯನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳದ ವಿಷಯಗಳನ್ನು ಹಂಚಿಕೊಳ್ಳಬೇಡಿ" ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ. ಇನ್‌ಸ್ಟಾಗ್ರಾಮ್, ’X’ ಮತ್ತು ಟೆಲಿಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ನೋಟಿಗೆ ಸಂಬಂಧಿಸಿದ ಪೋಸ್ಟ್‌ಗಳು ಕಾಣಿಸಿಕೊಂಡ ನಂತರ ಈ ಸ್ಪಷ್ಟನೆ ಹೊರಬಿದ್ದಿದೆ.
2016ರ ನವೆಂಬರ್ 8ರಂದು ಘೋಷಿಸಲಾದ ನೋಟು ಅಮಾನ್ಯೀಕರಣದ ವೇಳೆ, ಹಳೆಯ 5೦೦ ಮತ್ತು 1,೦೦೦ ರೂಪಾಯಿ ನೋಟುಗಳ ಕಾನೂನು ಮಾನ್ಯತೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಆ ಸಂದರ್ಭದಲ್ಲಿ ೧,೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು.