ನವದೆಹಲಿ: ಗುರುವಾರ ತಡರಾತ್ರಿ ಭೂತಾನ್‌ನಲ್ಲಿ ಹಿಮನದಿ ಗ್ಲೇಷಿಯಲ್ ಸರೋವರವೊಂದು ಒಡೆದು, ಪ್ರಾವಹದ ರೀತಿಯಲ್ಲಿ ನೀರು ನುಗ್ಗಿ ವ್ಯಾಪಕ ಹಾನಿ ಉಂಟಾಗಿದೆ.
ನೀರಿನ ಭಾರೀ ಪ್ರವಾಹವು ಭೂತಾನ್‍ನ ಪ್ರಸಿದ್ಧ 'ಗಾಸಾ ತ್ಶಾಚು' (Gasa Tshachu) ಬಿಸಿ ನೀರಿನ ಬುಗ್ಗೆಯನ್ನು ಸಹ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಿಂದಾಗಿ ಪುನಾಖಾ-ಗಾಸಾ ಹೆದ್ದಾರಿಯ ಒಂದು ಭಾಗ ಹಾನಿಗೊಳಗಾದ ಹಿನ್ನೆಲೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪ್ರಮಾಹದ ಈ ಪರಿಸ್ಥಿತಿಯಿಂದ ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಗ್ಲೇಷಿಯಲ್ ಸರೋವರದಿಂದ ರಭಸವಾಗಿ ನುಗ್ಗಿದ ನೀರು ಸಂಕೋಶ್ ನದಿಯ ನೀರಿನ ಮಟ್ಟವನ್ನು ಏರಿಸಿದೆ.
ಭೂತಾನ್‌ನಲ್ಲಿ ಉಗಮಿಸುವ ಸಂಕೋಶ್ ನದಿಯು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳ ಮೂಲಕ ಹರಿದು ಬ್ರಹ್ಮಪುತ್ರ ನದಿಯನ್ನು ಸೇವುದರಿಂದ ಪ್ರವಾಹದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ರಾಜ್ಯಗಳ ನದಿ ಪಾತ್ರದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ. ಪಶ್ಚಿಮ ಬಂಗಾಳದ ಅಲಿಪುರ್‌ದುವಾರ್ ಜಿಲ್ಲೆಯಲ್ಲಿ, ಆಡಳಿತವು 10,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿದೆ.
ರಾತ್ರಿಯಿಡೀ ಸೈರನ್‌ಗಳ ಮೂಲಕ ನಿವಾಸಿಗಳಿಗೆ ಸೂಚನೆ ನೀಡಿ, ಕೂಡಲೇ ತಮ್ಮ ಮನೆಗಳನ್ನು ತೊರೆಯುವಂತೆ ಕೋರಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ತಂಡಗಳನ್ನು ಈ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.